ಮುಂಡ್ಕೂರು ಲಕ್ಷ ದೀಪೋತ್ಸವ ; ಒಂದು ಅವಲೋಕನ.

ಶ್ರೀ ಕ್ಷೇತ್ರ ಮುಂಡ್ಕೂರಿನಲ್ಲಿ ಕಾರ್ತೀಕ ಮಾಸದಲ್ಲಿ ದೀಪಾರಾಧನೆ, ರಂಗಪೂಜೆ,ನಗರಭಜನೆ, ಉತ್ಸವಗಳು ಸುಮಾರು ತೊಂಬತ್ತೈದಕ್ಕೂ ಅಧಿಕ ವರ್ಷಗಳ ಹಿಂದೆ ಅರ್ಚಕರಾಗಿದ್ದ ಮಹಾನುಭಾವರ ಮುತುವರ್ಜಿಯಿಂದ ಆಗಿನ ಆಡಳಿತ ಮೊಕ್ತೇಸರರು, ಊರ ಗುತ್ತು, ಬಾಳಿಕೆ, ಪರಾಡಿ ಮನೆತನ ಮತ್ತು ಗೌಡ ಸಾರಸ್ವತ ಸಮಾಜ ಬಾಂಧವರು, ಭಜಕವೃಂದದವರ ಸಹಾಯ ಸಹಕಾರದೊಂದಿಗೆ ಆರಂಭಗೊಂಡಿತು.

ನಗರ ಸಂಕೀರ್ತನೆಗೆ ಜಿ.ಎಸ್.ಬಿ. ಸಮಾಜದ ಪ್ರಭು ಕುಟುಂಬಿಕರು ನೇತೃತ್ವ ವಹಿಸಿದರೆ, ಬಳಿಕ ಪ್ರತಿನಿತ್ಯ ಒಂದೊಂದು ಮನೆಯವರು ನಗರ ಭಜನಾ ಸೇವೆ ಮಾಡಿಸುವಂತೆ ಮನವೊಲಿಸಿ ಮನೆಮನೆಗಳಲ್ಲಿ ತಾಳದ ಶಬ್ದ ಕೇಳಲಿ ಎಂಬಂತೆ ನಡಿಗುತ್ತು ಕರೆ, ಭಟ್ರು ಕರೆ, ಹಾಗೂ ಪಟೇಲರ ಕರೆಗೆ ನಗರ ಸಂಕೀರ್ತನೆ ಮಾಡುತ್ತಾ ಭಕ್ತಾದಿಗಳು ಮನೆಮನೆಗೆ ತೆರಳಿ ಭಜನಾ ಪೂಜೆ ಆರಂಭಿಸಿದರು

ಕಾರ್ತಿಕ ಬಹುಳ ತ್ರಯೋದಶಿ, ಚತುರ್ದಶೀ, ದಿನದ ರಂಗಪೂಜೆ ಹಾಗೂ ಉತ್ಸವ ಬಲಿಯನ್ನು ಮುಂಡ್ಕೂರು ಪಟೇಲ್ ನಾರಾಯಣರಾವ್ ವಂಶಸ್ಥರೂ, ಇನ್ನೊಂದು ದಿನ ಮುಂಡ್ಕೂರು ನಡಿಗುತ್ತಿನ ವಂಶಸ್ಥರೂ ಮಾಡಿದರೆ ಕೊನೆಯ ದಿನವಾದ ಅಮಾವಾಸ್ಯೆಯಂದು ಭಕ್ತಾದಿಗಳ ಸಹಕಾರದೊಂದಿಗೆ ರಂಗಪೂಜೆ, ಉತ್ಸವ , ಗುರ್ಜೀ ಎಂಬ ವಿಶಿಷ್ಟ ಮಂಟಪವನ್ನು ರಚಿಸಿ, ಅದರಲ್ಲಿ ದಳಿಯಲ್ಲಿ ದೀಪ ಉರಿಸಿ, ಊರಲ್ಲಿ ಸಿಗುವ ಭಕ್ತಾದಿಗಳು ನೀಡುವ ವಿವಿಧ ಫಲವಸ್ತುಗಳು, ತರಕಾರಿಗಳು, ತೆಂಗು, ಅಡಿಕೆ, ಹೂಗಳಿಂದ ಅಲಂಕರಿಸಿ ಭಂಡಾರದ ವತಿಯಿಂದ , ದೀಪಾರಾಧನೆ ಪೂಜಾದಿಗಳನ್ನು ನಡೆಸಿ, ಸಿಡಿಮದ್ದು ಸಿಡಿಸಿ ಆ ದಿನದ ಉತ್ಸವ ಬಲಿಯನ್ನು ಅದ್ಧೂರಿಯಿಂದ ಆಚರಿಸಲು ಆರಂಭಿಸಲಾಗಿತ್ತು. ಹಣದ ಕೊರತೆಯನ್ನು ನೀಗಿಸಲು ಗುರ್ಜಿಗೆ ಅಲಂಕರಿಸಿದ ಫಲವಸ್ತು ತರಕಾರಿಗಳನ್ನು ಮರುದಿನ ಏಲಂ ಮಾಡಿ ಲಕ್ಷದೀಪೋತ್ಸವದ ಖರ್ಚನ್ನು ಸರಿದೂಗಿಸಲಾಗುತ್ತಿತ್ತು. ಲಕ್ಷದೀಪೋತ್ಸವ ಮಾಡಬೇಕೆಂಬ ಇರಾದೆಯಿಂದ ಅಂದಿನ ಅರ್ಚಕರು ಮನೆಮನೆಗೆ ತೆರಳಿ ಎಣ್ಣೆ ಹಾಗೂ ಬತ್ತಿಯನ್ನು ಬೇಡಿ ಸ್ವೀಕರಿಸಿ ಆರಂಭಿಸಿದ್ದನ್ನು ಇಂದಿಗೂ ಊರಿನ ಜನ ಮರೆತಿಲ್ಲ. ಅನಂತಾಚಾರ್ಯರು ಮೃತರಾಗುವ ದಿನ ಮಗನ ತೊಡೆಯಲ್ಲಿ ತಲೆ ಇರಿಸಿ ಆಡಿದ ಕೊನೆಯ ಮಾತು “ದಳಿಕ್ ದೀಪ ಇಜಿಯನಾ ಮಗಾ…” ಎಂದರೆ ಅವರಿಗೆ ದೀಪಾರಾಧನೆಯ ಬಗ್ಗೆ ಇದ್ದ ಶೃದ್ಧೆ ಎಂತಹದೆಂದು ತಿಳಿಯಬಹುದು…

ಇದನ್ನು ಗಮನದಲ್ಲಿಟ್ಟು ತಮ್ಮ ತಂದೆಯವರ ಮರಣಾನಂತರ ಪ್ರಧಾನ ಅರ್ಚಕರಾದ ಜಯರಾಮ ಆಚಾರ್ಯರು ಕಾರ್ತೀಪೂಜೆಯ ದಳಿಯನ್ನು ರಚಿಸಿ ಪ್ರತಿನಿತ್ಯ ಈ ವಿಶಿಷ್ಟ ಸಂಕ್ಷಿಪ್ತ ರಂಗಪೂಜಾ ವಿಧಿಯನ್ನೂ ಆರಂಭಿಸಿದರು.

ನಲವತ್ತೈದು ವರ್ಷಗಳ ಹಿಂದೆ, ದೇವಳದ ಒಳ ಪೌಳಿ ಹಾಗೂ ಹೊರಪೌಳಿಯಲ್ಲಿ ದಾಳಿಯ ನಿರ್ಮಾಣ ಭಕ್ತಾದಿಗಳ ಸಹಕಾರದಿಂದ ಮಾಡಿಸಿ, ನಿರಂತರ ದೀಪಾರಾಧನೆ ಆಗುವಂತೆಯೂ, ಕಾರ್ತೀಕ ಅಮಾವಾಸ್ಯೆಯಂದು ರೆಂಜಗುತ್ತು ದಿ.ಸರಸ್ವತೀ ಶೆಟ್ಟ್ತಿಯವರಿಂದ ದೊಡ್ಡ ರಂಗಪೂಜೆ ಸೇವೆಯನ್ನೂ ಮಾಡಿಸಲು ಶುರು ಮಾಡಿದರು.. (ಇಂದಿಗೂ ಅವರ ಮಕ್ಕಳು ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ) ೨೦೦೬ರ ಬ್ರಹ್ಮಕಲಶಾಭಿಷೇಕದ ಬಳಿಕ ನಗರ ಸಂಕೀರ್ತನೆಯೊಂದಿಗೆ ಅನ್ನೆದಗುತ್ತು ಜಯರಾಮ ಶೆಟ್ರವರು ದಾನನೀಡಿದ ಚಂದ್ರಮಂಡಲದಲ್ಲಿ ಸಾಲಂಕೃತ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಬಡಗುಪೇಟೆ ತೆಂಕುಪೇಟೆ ಸವಾರಿ ಬಳಿಕ ಗುರ್ಜಿಯಲ್ಲಿ ದೀಪೋತ್ಸವ, ದೀಪಾರಾಧನೆ ಮಾಡುವ ಕ್ರಮ ಆರಂಭಿಸಲಾಗಿದೆ.

ನವರಾತ್ರಿ ಹಾಗೂ ಶಿವರಾತ್ರಿಯ ಮಧ್ಯದ ಕಾಲ ಚಳಿಗಾಲ ಎಂಬ ವಾಡಿಕೆ. ಅದರಲ್ಲೂ ಶರದ್ರುತುವಿನ ಕಾರ್ತೀಕ ಮಾಸ ಮಳೆಯೂ ಚಳಿಯೂ ಒಟ್ಟಿಗಿರುವ ಕಾಲ ಎನ್ನಲಾಗುತ್ತಿದೆ. ವಿದ್ಯುತ್ ಇರದ ಆಗಿನ ಕಾಲದಲ್ಲಿ ಕ್ರಿಮಿ ಕೀಟಗಳನ್ನು ಆಕರ್ಶಿಸಲೆಂದೇ ದೀಪದ ಆರಾಧನೆ , ದೀಪೋತ್ಸವ, ದೀಪಾವಳಿಯ ಬಳಿಕದ ದಿನಗಳಲ್ಲಿ ಆಚರಿಸಲಾಗುವುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ… ಇದೀಗ ಮುಂಡ್ಕೂರು ದೀಪೋತ್ಸವ, ಲಕ್ಷದೀಪೋತ್ಸವದ ಸಮಯ… ಹಿರಿಯರೆಲ್ಲರೂ ಒಗ್ಗೂಡಿ ತುಂಬಾ ಬಡತನ, ಕಷ್ಟದ ಸಮಯದಲ್ಲಿ ಆರಂಭಿಸಿದ ನಗರ ಸಂಕೀರ್ತನೆ, ದೀಪೋತ್ಸವ, ಲೋಕಾ ದೀಪೋತ್ಸವ ಈಗ ವಿಜೃಂಭಣೆಯಿಂದ ಭಕ್ತಾದಿಗಳು ನಡೆಸಿಕೊಂಡು ಬರುತ್ತಿದ್ದಾರೆ…

ಮನೆಮನೆಗಳಲ್ಲಿ, ಮನಮನಗಳಲ್ಲಿ ಅರಳಲಿರುವ ಜ್ಞಾನ ದೀಪದ ಪ್ರತೀಕವಾಗಿ ಉರಿಸುವ ಲಕ್ಷ ದೀಪಗಳನ್ನು ಶ್ರೀ ದುರ್ಗಾಪರಮೇಶ್ವರಿ ಸಂತೋಷದಿಂದ ಸ್ವೀಕರಿಸಿ ಎಲ್ಲಾ ಭಕ್ತಾದಿಗಳಿಗೂ ಆಯುರಾರೋಗ್ಯ ಸುಖ ಶಾಂತಿಗಳನ್ನಿತ್ತು ಸಂರಕ್ಷಿಸಲೆಂದು ವಿನಮ್ರವಾಗಿ ಪ್ರಾರ್ಥಿಸೋಣ…

ಎಮ್. ರಘುವೀರ ಶೆಣೈ