ವೇ.ಮೂ. ಮುಂಡ್ಕೂರು ಜಯರಾಮ ಆಚಾರ್ಯರ ಜನ್ಮ ಶತಮಾನೋತ್ಸವ

ವೇ.ಮೂ. ಮುಂಡ್ಕೂರು ಜಯರಾಮ ಆಚಾರ್ಯರ ಜನ್ಮ ಶತಮಾನೋತ್ಸವ

|| ಶ್ರೀ ಕ್ಷೇತ್ರ ಮುಂಡ್ಕೂರು ||

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಮುಂಡ್ಕೂರು

‌28/1/2025

ಆಹ್ವಾನ ಪತ್ರಿಕೆ

ಪ್ರಿಯರೇ,

ನಮ್ಮ ತೀರ್ಥರೂಪರಾದ,
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪಾದಪದ್ಮಾರಾಧಕ, “ಅರ್ಚಕರತ್ನ” ದಿ. ವೇದಮೂರ್ತಿ ಜಯರಾಮ ಆಚಾರ್ಯರು ಜನ್ಮತಾಳಿ ಇದೀಗ ನೂರು ವರ್ಷ ಪೂರೈಸುತ್ತಿದೆ. ಅವರ ಜೀವಿತಾವಧಿಯಲ್ಲಿ 2003ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ (ರಿ) ಸ್ಥಾಪಿಸಿದರು. ಶ್ರೀ ಕ್ಷೇತ್ರದ ಅನನ್ಯ ಭಕ್ತರಾದ ಮುಂಬೈಯ ವ್ಯಾಪಾರೋದ್ಯಮಿ ಶ್ರೀ ರಾಘು ಟಿ. ಶೆಟ್ಟಿ ದಂಪತಿಗಳು, ” ಗುರುಪ್ರಸಾದ್”, ಮುಲ್ಲಡ್ಕ ಇವರುಗಳು ನಿರ್ಮಿಸಿ ಕೊಡುಗೆ ನೀಡಿದ “ಶ್ರೀ ಮಧ್ವಗುರುಕುಲ” ಎಂಬ ಕಟ್ಟಡದಲ್ಲಿ ಸಂಸ್ಕ್ರತ, ವೇದ, ಶಾಸ್ತ್ರ , ಪುರಾಣ, ಪೌರೋಹಿತ್ಯ ಆಗಮ ಪಾಠಗಳನ್ನು ಪೇಜಾವರ ಮಠಾಧೀಶ ಪೂಜ್ಯ ಶ್ರೀ ವಿಶ್ವೇಶತೀರ್ಥರು, ಉದ್ಘಾಟಿಸಿದರು.

ಈ ಸುಸಂದರ್ಭದಲ್ಲಿ ಧರ್ಮಾಧಿಕಾರಿಗಳಾದ ಡಾ . ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಖ್ಯಾತ ಹಿಂದಿ ನಟರಾದ ನಾನಾ ಪಾಟೇಕರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪೂಜ್ಯ ಜಯರಾಮ ಆಚಾರ್ಯರು 1940 ರಿಂದ 2012ರ ವರೆಗೂ ನಿರಂತರವಾಗಿ ಜಗನ್ಮಾತೆಯ ಸೇವೆಯಲ್ಲಿ ನಿರತರಾಗಿದ್ದರು. ಆದಿಯಲ್ಲಿ ದೇವಳದ ಆಡಳಿತ ಮೊಕ್ತೇಸರರಾಗಿದ್ದ ನಡಿಗುತ್ತು ಕೃಷ್ಣ ಶೆಟ್ರು ಮತ್ತು ನಡಿಗುತ್ತು ಎಂ. ಜಗದೀಶ್ಚಂದ್ರ ಹೆಗ್ಡೆಯವರ ಸಹಕಾರ, ಸಹಯೋಗದೊಂದಿಗೆ ದೇವಳದ ಸರ್ವಾಂಗೀಣ ಜೀರ್ಣೋದ್ಧಾರ ಪೂರ್ವಕ ಸರ್ವತೋಮುಖ ಅಭಿವೃದ್ಧಿ ಹಾಗೂ ಐದು ಬಾರಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕವನ್ನು ಊರಪರವೂರ ಭಕ್ತಾದಿಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಸುವಲ್ಲಿ ಪ್ರಮುಖ ಪಾತ್ರ, ನೇತೃತ್ವ ವಹಿಸಿದ್ದರು.


ಅವರು ತಮ್ಮ ಜೀವಿತಾವಧಿಯಲ್ಲಿ ತಮ್ಮ ವತಿಯಿಂದ, ಶತಾಯುಷಿಯೂ, ವೇದ ಪಂಡಿತರೂ ಆದ ಅಂಗಡಿಮಾರು ಶ್ರೀ ಕೃಷ್ಣ ಭಟ್ ರವರ ನೇತೃತ್ವದಲ್ಲಿ ಋಗ್ವೇದ ಮಂಗಲಪೂರ್ವಕ ಸಂಹಿತಾಯಾಗವನ್ನು 2007ರಲ್ಲಿ ಶ್ರೀ ಕ್ಷೇತ್ರ ಮುಂಡ್ಕೂರಲ್ಲಿ ನಡೆಸಿ ಶ್ರೀ ದೇವಿಯ ಪದತಲದಲ್ಲಿ ಸಮರ್ಪಿಸಿದ್ದರು. ಉಡುಪಿ ಪಲಿಮಾರು ಮಠಾಧೀಶರು* ಆರಂಭಿಸಿದ್ದ ” ಯೋಗ ದೀಪಿಕಾ” ಸಂಸ್ಥೆಯ ಸಹಯೋಗದೊಂದಿಗೆ ಅರ್ಹ ವಿದ್ಯಾರ್ಥಿಗಳಿಗೆ ವೇದಪಾಠ ತರಗತಿಗಳನ್ನು ಆರಂಭಿಸಲಾಯಿತು. ಎರಡು ಬಾರಿ ವೇದ ಮಂಗಳವನ್ನು ಕೃಷ್ಣಾಪುರ, ಪಲಿಮಾರು, ಪೇಜಾವರ ಮಠಾಧೀಶ ಪೂಜ್ಯ ಯತಿಗಳ ಸಮಕ್ಷಮದಲ್ಲಿ ಕ್ಷೇತ್ರಾಧೀಶ್ವರೀ ಶ್ರೀ ದುರ್ಗಾಪರಮೇಶ್ವರೀ ದೇವಿಯ ದಿವ್ಯ ಪದತಲದಲ್ಲಿ ಆರ್ಪಿಸಲಾಗಿತ್ತು.

ಇದು ವರೆಗೆ ಸುಮಾರು ಮೂವತ್ತಕ್ಕೂ ಅಧಿಕ ವೇದ, ಆಗಮ, ಪೌರೋಹಿತ್ಯ ಪಂಡಿತರನ್ನು “ಮಧ್ವಗುರುಕುಲ”ದಲ್ಲಿ ಪ್ರವಚನ ಮಾಡಿಸಿ ಹಿಂದೂ ಸಮಾಜಕ್ಕೆ ಕಾಣಿಕೆಯಾಗಿ ನೀಡಲಾಗಿದೆ ಅನ್ನೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.
ತದನಂತರದ ದಿನಗಳಲ್ಲಿ ಎರಡು ಬಾರಿ ವೇದ, ಪೌರೋಹಿತ್ಯ, ಆಗಮ ಪಾಠಗಳನ್ನು ಪೂರೈಸಿ ವೇದ ಮಂಗಳವನ್ನು ಆಚರಿಸಲಾಗಿತ್ತು.

ಇದಲ್ಲದೆ ಕಜೆ ಮಹಮ್ಮಾಯಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕಾರ್ಯದಲ್ಲಿ ಅಲ್ಲಿನ ಆಡಳಿತದಾರರಾದ ಕಜೆ ಆರು ಮನೆಯವರು ಹಾಗೂ ಗೌರವಾಧ್ಯಕ್ಷರಾದ ಎಂ. ಜಿ. ಕರ್ಕೇರ, ಮತ್ತು ಊರಪರವೂರ ಭಕ್ತಾದಿಗಳ ಸಹಯೋಗದಿಂದ ಪ್ರಮುಖ ಪಾತ್ರ ವಹಿಸಿದ್ದರು. ಹಾಗೂ ಉಳೇಪಾಡಿ ಶ್ರೀ ಉಮಾಮಹೇಶ್ವರ ದೇವಳದ ಸರ್ವತೋಮುಖ ಅಭಿವೃದ್ಧಿ ಯಲ್ಲಿ ಗ್ರಾಮಸ್ಥರ, ಊರಪರವೂರ ಭಕ್ತಾದಿಗಳ ಸಹಯೋಗದೊಂದಿಗೆ ನಡೆಸಿದ ಕೀರ್ತಿಯೂ ಜಯರಾಮ ಆಚಾರ್ಯರದ್ದು.

ಇದೀಗ ನಮ್ಮ ತೀರ್ಥರೂಪ ಪೂಜ್ಯ ಜಯರಾಮ ಆಚಾರ್ಯರ ಜನ್ಮಶತಾಬ್ದಿಯ ಸುಸಂದರ್ಭದಲ್ಲಿ ಅವರ ಸವಿನೆನಪಿಗಾಗಿ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ಯಜುರ್ವೇದ ಸಂಹಿತಾ ಯಾಗವನ್ನು ವಿದ್ವಾನ್ ಅಡ್ವೆ ಶ್ರೀ ಲಕ್ಷ್ಮೀಶ ಆಚಾರ್ಯರ ನೇತೃತ್ವದಲ್ಲಿ, ಯಜುರ್ವೇದ ಋತ್ವಿಕ್ ಸಮೂಹದಿಂದ, ರಾಷ್ಟ್ರಕ್ಷೇಮಕ್ಕಾಗಿ ಮತ್ತು ಊರಪರವೂರ ಭಕ್ತಾದಿಗಳ ಉತ್ತರೋತ್ತರ ಶ್ರೇಯಸ್ಸಿಗಾಗಿ ನಡೆಸಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಪಾದಾರವಿಂದಗಳಿಗೆ ಅರ್ಪಿಸಿ ಕ್ಷೇತ್ರಾಭಿವೃದ್ಧಿಗಾಗಿ ಪ್ರಾರ್ಥಿಸುವುದೆಂದು ನಿಶ್ಚಯಿಸಲಾಗಿದೆ. ಆ ದಿನ ಅಂದರೆ
ದಿನಾಂಕ 17/2/2025 ಸೋಮವಾರ ಪೂರ್ವಾಹ್ನ ಗಂಟೆ 6ರಿಂದ 10.30ರ ವರೆಗೆ ಏಳು ಕುಂಡಗಳಲ್ಲಿ ಈ ಯಾಗವು ನೆರವೇರಲಿದೆ. ಪೂರ್ಣಾಹುತಿ, ಶ್ರೀದೇವರ ಮಹಾಪೂಜಾದಿಗಳ ನಂತರ ಮಧ್ಯಾಹ್ನ ಪ್ರಸಾದ ವಿತರಣೆ ನೆರವೇರಲಿದೆ .

ಈ ಸುಸಂದರ್ಭದಲ್ಲಿ ಹಿಂದಿನ ದಿನ ಅಂದರೆ 16.2.2025 ಭಾನುವಾರದಂದು ಸಂಜೆ ಮೂರು ಗಂಟೆಗೆ ಉಡುಪಿ ನಮ್ಮ ಕುಲಗುರುಗಳಾದ ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀಕ್ಷೇತ್ರಕ್ಕೆ ಚಿತ್ತೈಸಲು ಸಮ್ಮತಿಸಿದ್ದಾರೆ. ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಸನ್ನಿಧಾನದಲ್ಲಿ 17/2/2025ರಂದು ನಡೆಯುವ ಯಜುರ್ವೇದ ಸಂಹಿತಾಯಾಗದ ಪೂರ್ವಭಾವೀ ಪ್ರಾರ್ಥನಾ ಸುಸಂಧರ್ಭದಲ್ಲಿ ಭಾಗವಹಿಸಿ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿದ್ದಾರೆ.


ತಾವೆಲ್ಲರೂ ಈ ಎರಡೂ ದಿನಗಳ ಮಹತ್ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿಯೂ, ಶ್ರೀಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ನಮ್ಮ ಆದರಾತಿಥ್ಯವನ್ನು ಸ್ವೀಕರಿಸಬೇಕಾಗಿಯೂ ಸವಿನಯ ವಿನಂತಿ.


ಇಂತೀ ತಮ್ಮ ಆಗಮನಾಭಿಲಾಷಿಗಳಾದ

ಶ್ರೀ ದೇವಿಯ ಪರಂಪರಾಗತ ಅರ್ಚಕರಾದ,
ಅನಂತಕೃಷ್ಣ ಆಚಾರ್ಯ
ರಾಘವೇಂದ್ರ ಆಚಾರ್ಯ
ರಾಮದಾಸ ಆಚಾರ್ಯ
ಮಧ್ವಪತಿ ಆಚಾರ್ಯ
(ಪುತ್ರರು)

ಜಯಲಕ್ಷ್ಮೀ ಪ್ರಕಾಶ ಉಡುಪ, ಚೆನ್ನೈ (ಮಗಳು).
ವೈ. ಅನಂತಪದ್ಮನಾಭ ಭಟ್, ಕಾರ್ಕಳ (ಅಳಿಯ)

ಸಹಯೋಗ

ಸುರೇಂದ್ರ ಶೆಟ್ಟಿ ,
ಕೋರಿ ಬೆಟ್ಟುಗುತ್ತು,
ಅಧ್ಯಕ್ಷರು,
ವ್ಯವಸ್ಥಾಪನಾ ಸಮಿತಿ, ಮತ್ತು ಸರ್ವ ಸದಸ್ಯರು, ದೇವಳದ ನೌಕರ ವೃಂದ ಹಾಗೂ ಬಂಧು ಮಿತ್ರರು .

Leave a Reply

Your email address will not be published.